President's Message for the 75th Annual General Body Meeting
ಆತ್ಮೀಯ ಸದಸ್ಯರೇ,
ನಮ್ಮ ನಿಮ್ಮೆಲ್ಲರ ಅಭಿಮಾನದ ವಿಲ್ಸನ್ ಗಾರ್ಡನ್ ಕ್ಲಬ್‌ನ 75ನೇ ವರ್ಷದ ಸರ್ವ ಸದಸ್ಯರ ಸಭೆಗೆ ತಮ್ಮೆಲ್ಲರನ್ನು ಹೃತ್ತೂರ್ವಕವಾಗಿ ಆಡಳಿತ ಮಂಡಳಿಯ ಪರವಾಗಿ ಸ್ವಾಗತಿಸುತ್ತೇನೆ.
ಈ ನಮ್ಮ ಕ್ಲಬ್‌ನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿರುವ ಮನ್ನಣೆ ಹಾಗೂ ಸುಯೋಗವೆಂದು ನಾನು ಭಾವಿಸಿರುತ್ತೇನೆ.
ನಾವು ನಮ್ಮ ಧೈಯವಾಕ್ಯವಾದ “ಎಲ್ಲವೂ ಸಾಧ್ಯ” ಎಂಬ ಉದ್ದೇಶದಿಂದಲೇ ನಮ್ಮೆಲ್ಲ ಕಾರ್ಯವನ್ನು ನಿರ್ವಹಿಸಿದ್ದೇವೆ. ನಮ್ಮ ಆಡಳಿತ ಮಂಡಳಿಯು ತೆಗೆದುಕೊಳ್ಳುವ ನಿರ್ಧಾರ, ಪ್ರಕ್ರಿಯೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿ ಸಹಕರಿಸುತ್ತಿರುವ ಅವರ ಸಮರ್ಪಣ ಮನೋಭಾವಕ್ಕೆ ನಾನು ಅಭಾರಿಯಾಗಿರುತ್ತೇನೆ.
ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ, ಈ ಕ್ಲಬ್‌ನ ಅಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಅನಿರೀಕ್ಷಿತವಾದ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷತೆ ವಹಿಸಬೇಕಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿತ್ತು. ಅಂತಹ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ತಾವೆಲ್ಲರೂ ನನಗೆ ಬೆಂಬಲವಾಗಿ ನಿಂತ ಪರಿಣಾಮ ಇಂದು ಕ್ಲಬ್‌ನ ಜಾಗ ಸ್ವಂತದಲ್ಲಿದ್ದು, ಅದರಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗಿದ್ದು, ಇದಕ್ಕಾಗಿ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ.
ಕ್ಲಬ್‌ನಲ್ಲಿ ಇಂದು ಸುಸಜ್ಜಿತವಾದ ಬಾರ್, ಕ್ಯಾಂಟೀನ್, ಕಾರ್ಡ್ಸ್ ರೂಮ್, ಲಕ್ಷುರಿ ಗೆಸ್ಟ್ ಕೊಠಡಿಗಳು, ಷೆಟಲ್ ಕೋರ್ಟ್, ಪಾರ್ಟಿಹಾಲ್‌ಗಳಿದ್ದು, ಇವುಗಳ ನಿರ್ವಹಣೆಗಾಗಿ ಉಪ ಸಮಿತಿಗಳನ್ನು ರಚಿಸಿದ್ದು, ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಕಾರ್ಯ ವೈಖರಿಯಿಂದ ಇವುಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕಾಗಿ ತಮ್ಮ ಸಮಯವನ್ನು ಕ್ಲಬ್‌ನ ಅಭಿವೃದ್ಧಿಗಾಗಿ ವಿನಿಯೋಗಿಸಿದ್ದಕ್ಕಾಗಿ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ನಾನು ಅಭಾರಿಯಾಗಿರುತ್ತೇನೆ.
ಸನ್ಮಾನ್ಯ ಸದಸ್ಯರೇ, ಕಳೆದ 74ನೇ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಅಂದರೆ ಇದೇ 75ನೇ ವಾರ್ಷಿಕ ಮಹಾಸಭೆಯು ಪ್ಲಾಟಿನಂ ವರ್ಷವಾಗಿದ್ದು, ಇದನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಅಂದಿನ ಮಹಾಸಭೆಯಲ್ಲಿ ಚರ್ಚಿಸಿದ್ದೆವು. ಅಂತೆಯೇ ಕ್ಲಬ್‌ನ ಸದಸ್ಯತ್ವವನ್ನು ರೂ.ಒಂದು ಲಕ್ಷದಿಂದ ರೂ.ಎರಡು ಲಕ್ಷಕ್ಕೆ ಏರಿಸಲಾಯಿತು. ದುರಾದೃಷ್ಟವಶಾತ್ ಕಳೆದ ಸರ್ವ ಸದಸ್ಯರ ಸಭೆ ನಡೆದ ಬಳಿಕ ದಿನಾಂಕ: 31.03.2026 ರವರೆಗೆ ಯಾರೂ ಕ್ಲಬ್‌ನ ಸದಸ್ಯರಾಗದ ಕಾರಣ, ಕ್ಲಬ್ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು.
ಆದರೂ ಸಹಾ ಬಹಳ ಕಷ್ಟಪಟ್ಟು ಕೈಸಾಲಗಳನ್ನು (ಅನ್ ಸೆಕ್ಯೂರ್ಡ್ ಲೋನ್) ತೆಗೆದುಕೊಂಡು ಬ್ಯಾಂಕಿನ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸಿದ್ದು, ಈ ಕಾರಣದಿಂದಾಗಿ ಕ್ಲಬ್‌ನ ಪ್ಲಾಟಿನಂ ವರ್ಷವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾಧಿಸುತ್ತೇವೆ.
ಮಾನ್ಯ ಸದಸ್ಯರು ನೀಡುತ್ತಿರುವ ಸಹಕಾರ ಹಾಗೂ ಬೆಂಬಲವನ್ನು ಇದೇ ರೀತಿ ಮುಂದುವರೆಸಿ, ಈ ನಿಮ್ಮ ಕ್ಲಬ್ ಇನ್ನೂ ಉತ್ತಮ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಲು ಅವಕಾಶ ನೀಡುತ್ತೀರೆಂದು ಭಾವಿಸಿ, 2025-26ನೇ ಸರ್ವ ಸದಸ್ಯರ ಸಭೆಯಲ್ಲಿ ತಾವೆಲ್ಲರೂ ತಪ್ಪದೇ ಭಾಗವಹಿಸಿ, ತಮ್ಮೆಲ್ಲರ ಸಲಹೆ, ಸೂಚನೆಗಳನ್ನು ಕ್ಲಬ್‌ನ ಅಭಿವೃದ್ಧಿಗೆ ಪೂರಕವಾಗುವಂತೆ ನೀಡುತ್ತೀರೆಂದು ಭಾವಿಸಿ, ನನ್ನ ನುಡಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
(ಟಿ.ಆರ್. ಶ್ರೀನಿವಾಸ ರೆಡ್ಡಿ)
ಅಧ್ಯಕ್ಷರು